ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 7760990130 7760999167

ಯೋಜನೆಯ ಕುರಿತು

ಕರಾರಸಾ ನಿಗಮದ ನೌಕರರ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ (Contributory Scheme)



ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು/ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ವೈದ್ಯಕೀಯ ಚಿಕಿತ್ಸೆಯ ನಿಬಂಧನೆಗಳು -1970 ರನ್ವಯ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ವಯ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ನಿಗಮದ ಅಧಿಕಾರಿಗಳು/ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಸರ್ಕಾರದ ಮಾನ್ಯತೆ ಹೊಂದಿರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿ/ಹೊರರೋಗಿಯಾಗಿ ಪಡೆದ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು CGHS 2014 ರ ದರಪಟ್ಟಿಯನ್ವಯ ಮರುಪಾವತಿ ಮಾಡಲಾಗುತ್ತಿದೆ. ಅಲ್ಲದೇ, ಅಧಿಕಾರಿಗಳು/ನೌಕರರು ಹಾಗೂ ಅವರ ಅವಲಂಬಿತ ಸದಸ್ಯರ ತುರ್ತು ಚಿಕಿತ್ಸೆಗೆಅನುಕೂಲವಾಗುವಂತೆ ಆಸ್ಪತ್ರೆಗಳಿಂದ ನೀಡುವ ಅಂದಾಜು ಪಟ್ಟಿಯನ್ವಯ ವೈದ್ಯಕೀಯ ಮುಂಗಡವನ್ನು ಮಂಜೂರು ಮಾಡುವ ಕ್ರಮ ಜಾರಿಯಲ್ಲಿರುತ್ತದೆ.

ಈಗಿರುವ ವ್ಯವಸ್ಥೆಯಲ್ಲಿ ಖಾಸಗಿ ಆಸ್ಪತ್ರೆಗಳು CGHS ದರಗಳಿಗಿಂತ ಹೆಚ್ಚಿನ ದರಗಳನ್ನು ಅಂದರೆ, ಆಸ್ಪತ್ರೆಯ ದರಗಳನ್ನು ವಿಧಿಸುತ್ತಿರುತ್ತವೆ. ತತ್ಸಂಬಂಧ ನೌಕರರು ವೈದ್ಯಕೀಯ ಚಿಕಿತ್ಸೆಗಾಗಿ ಭರಿಸಿದ ಮೊತ್ತವು ಪೂರ್ಣ ಪ್ರಮಾಣದಲ್ಲಿ ಮರುಪಾವತಿಯಾಗುವುದಿಲ್ಲ. ಇದರಿಂದಾಗಿ ನೌಕರರು ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆಯು ನೌಕರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಉತ್ತಮ ವೈದ್ಯಕೀಯ ಸೌಲಭ್ಯವನ್ನು ಕಲ್ಪಿಸುವ ಸದುದ್ದೇಶವನ್ನು ಹೊಂದಿರುತ್ತದೆ.  ಅಲ್ಲದೇ, ನಗದು ರಹಿತ ವೈದ್ಯಕೀಯ ವ್ಯವಸ್ಥೆಯನ್ನು ಜಾರಿಗೆ ತರುವುದು ನೌಕರರ ಬಹುದಿನಗಳ ಬೇಡಿಕೆ ಆಗಿರುತ್ತದೆ. ತತ್ಸಂಬಂಧ ಎಲ್ಲಾ ನೊಂದಾಯಿತ ಕಾರ್ಮಿಕ ಸಂಘಟನೆಗಳು ನೌಕರರ ವಂತಿಕೆಯೊಂದಿಗೆ (Contributory Scheme) ಉತ್ತಮ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆಯನ್ನು ಜಾರಿಗೆ ತರುವಂತೆ ನಿರಂತರವಾಗಿ ಒತ್ತಾಯಿಸುತ್ತಿರುತ್ತವೆ.

ದಿನಾಂಕ:13.11.2024 ರಂದು ನಡೆದ ಕರಾರಸಾ ನಿಗಮದ ನಿರ್ದೇಶಕ ಮಂಡಳಿಯ 456 ನೇ ಸಭೆಯಲ್ಲಿ ವಿಷಯವನ್ನು ಮಂಡಿಸಿದ್ದು, ನಿಗಮದ ಎಲ್ಲಾ ನೌಕರರು ಮತ್ತು ಅವಲಂಬಿತ ಕುಟುಂಬದ ಸದಸ್ಯರಿಗೆ ನೌಕರರ ಮಾಸಿಕ ವಂತಿಕೆಯೊಂದಿಗೆ (Contributory Scheme) ನಗದು ರಹಿತ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಯನ್ನು ರೂಪಿಸಲು ಮಂಡಳಿ ಠರಾವು ಸಂಖ್ಯೆ:10475/456 ರಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು/ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲು ನೂತನ “ಕೆ.ಎಸ್.ಆರ್.ಟಿ.ಸಿ ಆರೋಗ್ಯ”ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಈ ಕೆಳಗಿನಂತೆ ನಿರ್ದೇಶನಗಳನ್ನು ನೀಡಲಾಗಿದೆ.

  1. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ವೈದ್ಯಕೀಯ ಚಿಕಿತ್ಸೆಯ ನಿಯಮಗಳು-1970 ಗೆ ಸೇರ್ಪಡೆ/ತಿದ್ದುಪಡಿ ಕೈಗೊಳ್ಳುವುದನ್ನು ಬಾಕಿ ಇಟ್ಟು “ಕೆ.ಎಸ್.ಆರ್.ಟಿ.ಸಿ ಆರೋಗ್ಯ”ಯೋಜನೆಯನ್ನು ರೂಪಿಸಲಾಗುತ್ತಿದೆ.
  2. ನಿಗಮದ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಪಡೆಯುವ ವೈದ್ಯಕೀಯ ಚಿಕಿತ್ಸೆ ಮತ್ತು ಚಿಕಿತ್ಸಾ ವೆಚ್ಚದ ಮರುಪಾವತಿಗೆ ಸಂಬಂಧಿಸಿದಂತೆ ಸಂದರ್ಭಾನುಸಾರ ಪ್ರಸ್ತುತ ಜಾರಿಯಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ವೈದ್ಯಕೀಯ ಚಿಕಿತ್ಸೆಯ ನಿಬಂಧನೆಗಳು -1970(ಪ್ರಸ್ತುತ ಜಾರಿಯಲ್ಲಿರುವ ಸರ್ಕಾರದ ಮಾರ್ಗಸೂಚಿಗಳನ್ನೊಳಗೊಂಡಂತೆ) ಹಾಗೂ ನೂತನ “ಕೆ.ಎಸ್.ಆರ್.ಟಿ.ಸಿ ಆರೋಗ್ಯ”ಯೋಜನೆ ಎರಡೂ ಜಾರಿಯಲ್ಲಿರುತ್ತವೆ. ಅಂದರೆ “ಕೆ.ಎಸ್.ಆರ್.ಟಿ.ಸಿ ಆರೋಗ್ಯ”ಯೋಜನೆಯಡಿ ಮಾನ್ಯತೆ ಪಡೆದ ಆಸ್ಪತ್ರೆಯಲ್ಲಿ ಪಡೆದ ಚಿಕಿತ್ಸೆಯೂ ನಗದು ರಹಿತಾ ಚಿಕಿತ್ಸಾ ವ್ಯಾಪ್ತಿಗೆ ಹಾಗೂ ಮಾನ್ಯತೆ ಹೊಂದಿರದ ಆಸ್ಪತ್ರೆಗಳಲ್ಲಿ ಪಡೆದ ಚಿಕಿತ್ಸಾ ವೆಚ್ಚವನ್ನು ಪ್ರಸ್ತುತ ಜಾರಿಯಲ್ಲಿರುವ ನಿಯಮಗಳನ್ವಯ ಮರುಪಾವತಿ ಮಾಡಲಾಗುವುದು.
  3. ನೂತನ “ಕೆ.ಎಸ್.ಆರ್.ಟಿ.ಸಿ ಆರೋಗ್ಯ”ಯೋಜನೆಯಅನುಷ್ಠಾನ ಹಾಗೂ ನಿರ್ವಹಣೆಗಾಗಿ ಪ್ರತ್ಯೇಕ ನ್ಯಾಸ ಮಂಡಳಿಯನ್ನು (ಟ್ರಸ್ಟ್) ರಚಿಸಲಾಗಿದ್ದು, ಈ ಟ್ರಸ್ಟ್‌ ನಲ್ಲಿ ಚಾಲಕ, ಚಾಲಕ-ಕಂ-ನಿರ್ವಾಹಕ/ನಿರ್ವಾಹಕ, ತಾಂತ್ರಿಕ ಹಾಗೂ ಆಡಳಿತ ಸಿಬ್ಬಂದಿಗಳ ಪರವಾಗಿ ತಲಾ ಒಬ್ಬರಂತೆ ಟ್ರಸ್ಟ್‌ ನ ಸದಸ್ಯರನ್ನಾಗಿ ಪ್ರತಿವರ್ಷ (On Rotation basis) ಒಂದು ವರ್ಷದ ಅವಧಿಗೆ ನಿಯೋಜಿಸಲಾಗುತ್ತದೆ.

ಪ್ರಾರಂಭದಲ್ಲಿ ನಿಗಮವು ರೂ. 20 ಕೋಟಿಗಳನ್ನು ಟ್ರಸ್ಟ್‌ಗೆ ಪಾವತಿಸುತ್ತದೆ. ಅಲ್ಲದೇ, ಈ ಮೊತ್ತದೊಂದಿಗೆ ಪ್ರತಿವರ್ಷ ಶೇಕಡ 5 ರ ದರದಲ್ಲಿ ಹೆಚ್ಚಿಸಿ ಟ್ರಸ್ಟ್‌ ಗೆ ಪಾವತಿಸಲಾಗುತ್ತದೆ. ಒಂದುವೇಳೆ ನಿಗಮದ ವಂತಿಕೆ ಮತ್ತು ನೌಕರರ ವಂತಿಕೆ ಮೊತ್ತ ಸೇರಿದಂತೆ ನಿಧಿಯಲ್ಲಿ ಲಭ್ಯವಿರುವ ಮೊತ್ತದಲ್ಲಿ ವೈದ್ಯಕೀಯ ವೆಚ್ಚ ಪಾವತಿಸಲು ಕೊರತೆ ಆದಲ್ಲಿ ವ್ಯತ್ಯಾಸದ ಮೊತ್ತವನ್ನೂ ಸಹ ನಿಗಮವೇ ಟ್ರಸ್ಟ್‌ ಗೆ ಪಾವತಿಸುತ್ತದೆ.

  1. ಈ ಯೋಜನೆಯ ವಾಸ್ತವ ಕಾರ್ಯಾಚರಣೆಯು ದಿನಾಂಕ:06.01.2025 ರಿಂದ ಜಾರಿಗೆ ಬರುತ್ತದೆ.
  1. ಅನ್ವಯಿಕೆ (Applicability):
    • ನಿಗಮದ ಸೇವೆಯಲ್ಲಿರುವ ಅಧಿಕಾರಿಗಳು, ತರಬೇತಿ, ಪರಿಕ್ಷಾರ್ಥಿ ಹಾಗೂ ಖಾಯಂನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರು. (ಪತಿ/ಪತ್ನಿ, ತಂದೆ, ತಾಯಿ ಹಾಗೂ ಮಕ್ಕಳು)
    • ರಾಜ್ಯ ಸರ್ಕಾರದಿಂದನಿಗಮದಸೇವೆಗೆನಿಯೋಜನೆಮೇರೆಗೆ (ಹೆಚ್ಚುವರಿ/ಪ್ರಭಾರ ಸೇವೆಯೂ ಸೇರಿದಂತೆ) ಬರುವ ಅಖಿಲ ಭಾರತ ಸೇವೆಗಳು (IAS, IPS, IFS), ಹಾಗೂ ಕರ್ನಾಟಕಆಡಳಿತಸೇವೆಯಅಧಿಕಾರಿಗಳು (KAS) ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರು.
  2. ಕುಟುಂಬ (Family):
    • ನಿಗಮದ ನೌಕರನ/ಳ ಪತಿ ಅಥವಾ ಪತ್ನಿ
    • ತಂದೆ ಮತ್ತುತಾಯಿ (ಮಲತಾಯಿಯನ್ನೊಳಗೊಂಡಂತೆ) ಅವರು ನಿಗಮದ ನೌಕರರ ಮೇಲೆ ಸಂಪೂರ್ಣ ಅವಲಂಬಿತರಾಗಿದ್ದು ಮತ್ತು ಅವರ ಒಟ್ಟು ಮಾಸಿಕ ಆದಾಯ ಚಾಲ್ತಿಯಲ್ಲಿರುವ ಕನಿಷ್ಠ ಪಿಂಚಣಿ (ರೂ.13500/-) ಹಾಗೂ ತುಟ್ಟಿ ಭತ್ಯೆಯನ್ನು ಒಳಗೊಂಡ ಮೊತ್ತವನ್ನು ಮೀರದಿದ್ದಲ್ಲಿ. ( ಸರ್ಕಾರದ ಮಟ್ಟದಲ್ಲಿ ಕಾಲಕಾಲಕ್ಕೆ ಅಳವಡಿಸಿಕೊಳ್ಳುವ ನಿಯಮಗಳನ್ನು ಒಳಗೊಂಡಂತೆ)
    • ನಿಗಮದ ನೌಕರನ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವ ಮಕ್ಕಳು, ದತ್ತು ಪಡೆದ ಮಕ್ಕಳು ಮತ್ತು ಮಲಮಕ್ಕಳನ್ನೊಳಗೊಂಡಂತೆ (25 ವರ್ಷ ವಯೋಮಿತಿ ಮೀರುವವರೆಗೆ ಅಥವಾ ವಿವಾಹವಾಗುವವರೆಗೆ ಯಾವುದು ಮೊದಲೋ ಅದನ್ನು ಪರಿಗಣಿಸುವುದು)
    • ಅಂಧ/ಚಲನ ವೈಕಲ್ಯ/ಬುದ್ದಿಮಾಂದ್ಯತೆ ಹೊಂದಿ, ನೌಕರರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವ ವಿಶೇಷಚೇತನ ಮಕ್ಕಳು. (ಈ ಪ್ರಕರಣಗಳಲ್ಲಿ ವಯೋಮಿತಿ ಅನ್ವಯಿಸುವುದಿಲ್ಲ. ತತ್ಸಂಬಂಧ ನೌಕರನು ಸ್ವಯಂ ದೃಢೀಕರಣ ಹಾಗೂ ಸಕ್ಷಮ ಪ್ರಾಧಿಕಾರದಿಂದ ಪಡೆದಿರುವ ಪ್ರಮಾಣ ಪತ್ರ ಸಲ್ಲಿಸುವುದು)
  3. ಅನ್ವಯಿಸದಿರುವಿಕೆ: (Non-Applicability):
    • ನಿಗಮದಲ್ಲಿ ಗುತ್ತಿಗೆ/ಹೊರಗುತ್ತಿಗೆ/ದಿನಗೂಲಿ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಖಾಸಗಿ ನೌಕರರು.
    • ಸರ್ಕಾರದ ಇತರೇ ಇಲಾಖೆಗಳಿಂದ ಹಾಗೂ ಇತರೇ ಸಾರಿಗೆ/ನಿಗಮಗಳಿಂದ ಎರವಲು ಸೇವೆಯ ಮೇಲೆ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು.
    • ಕರಾರಸಾ ನಿಗಮದಿಂದ ಸರ್ಕಾರದ ಇತರೇ ಇಲಾಖೆಗಳಿಗೆ ಹಾಗೂ ಇತರೇ ಸಾರಿಗೆ/ನಿಗಮಗಳಿಗೆ ಎರವಲು ಸೇವೆಯ ಮೇಲೆ ಹೋಗಿರುವ ನೌಕರರು.
    • ನಿಗಮದಲ್ಲಿ ತರಬೇತಿಯಲ್ಲಿರುವ ಶಿಶುಕ್ಷುಗಳು.
    • 25 ವರ್ಷ ವಯೋಮಿತಿ ಮೀರಿರುವ, ವಿವಾಹಿತರಾಗಿರುವ ಮತ್ತು ಉದ್ಯೋಗಸ್ಥರಾಗಿದ್ದು, ಆರ್ಥಿಕವಾಗಿ ಸ್ವಾವಲಂಭಿಗಳಾಗಿರುವ ಮಕ್ಕಳು.
    • ನ್ಯಾಯಾಲಯದ ಮದ್ಯಂತರದ ಆದೇಶದ (17/B) ರನ್ವಯ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು.
    • ನಿಗದಿತ ಆದಾಯದ ಮಿತಿಗಿಂತ ಹೆಚ್ಚಿನ ಆದಾಯವನ್ನು ಹೊಂದಿರುವ ನೌಕರರ ತಂದೆ ಮತ್ತು ತಾಯಿ.
    • ಕಾರಣಾಂತರಗಳಿಂದ 03 ತಿಂಗಳು ಮೇಲ್ಪಟ್ಟು ಮಾಸಿಕ ವಂತಿಕೆ ಕಡಿತ ಆಗದಿರುವ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರು. (ನೌಕರರು ಕರ್ತವ್ಯಕ್ಕೆ ಹಾಜರಾಗಿ ವಂತಿಕೆ ಕಡಿತಗೊಂಡ ನಂತರ ಈ ಯೋಜನೆಯಡಿ ಸೌಲಭ್ಯ ಪಡೆಯಲು ಮತ್ತೆ ಅರ್ಹರಾಗುತ್ತಾರೆ.)
    • ವಿವರಣೆ: ನೌಕರರು ಕರ್ತವ್ಯಕ್ಕೆ ಗೈರುಹಾಜರಾಗಿ 03 ತಿಂಗಳವರೆಗೆ ವಂತಿಕೆ ಕಡಿತವಾಗದಿದ್ದರೂ ಸಹ ನೌಕರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರ ಆರೋಗ್ಯದ ಹಿತದೃಷ್ಠಿಯಿಂದ ಬಾಕಿ ವಂತಿಕೆಯನ್ನು ಪಾವತಿಸುವ ಷರತ್ತಿಗೆ ಒಳಪಟ್ಟು ಈ ಯೋಜನೆಯಡಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿರುತ್ತದೆ.
  4. ಅರ್ಹತಾದಾಯಕ ಚಿಕಿತ್ಸಾ ದರಗಳು :
    • ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (CGHS) ಅನ್ವಯ ಇತ್ತೀಚಿಗೆಪರಿಷ್ಕರಿಸಿದ, ಕಾಲಕಾಲಕ್ಕೆ ಪರಿಷ್ಕರಣೆ ಆಗುವ/ಚಾಲ್ತಿಯಲ್ಲಿರುವ ವೈದ್ಯಕೀಯಚಿಕಿತ್ಸಾದರಪಟ್ಟಿಯದರಗಳು (Updated Rates) ಹಾಗೂ ರಾಜ್ಯ ಸರ್ಕಾರಿ ನೌಕರರ ವೈದ್ಯಕೀಯ ವೆಚ್ಚ ಮರುಪಾವತಿ ಸಂಬಂಧ ಸರ್ಕಾರ ಅಳವಡಿಸಿಕೊಂಡಿರುವ /ಕಾಲಕಾಲಕ್ಕೆ ಅಳವಡಿಸಿಕೊಳ್ಳುವ ದರಗಳು.
    • ಈ ಮೇಲ್ಕಂಡ ದರಪಟ್ಟಿಯಲ್ಲಿ ಇಲ್ಲದ ಚಿಕಿತ್ಸಾ ವಿಧಾನಗಳ ದರಗಳ ಬಗ್ಗೆ ಕಾಲಕಾಲಕ್ಕೆ ಸರ್ಕಾರದಿಂದ ಸ್ಪಷ್ಟೀಕರಣ ಪಡೆದು ಕೊಂಡಿರುವ ಹಾಗೂ ಸರ್ಕಾರದ ದೃಢೀಕೃತ ಸಂಸ್ಥೆಯಿಂದ ಪಡೆದುಕೊಂಡಿರುವ ದರಗಳು.
  1. ವೈದ್ಯಕೀಯ ಸಂಸ್ಥೆಗಳು:ನಿಗಮದ ಮಾನ್ಯತೆ ಪಟ್ಟಿಯಲ್ಲಿದ್ದು ಯೋಜನೆಗೆ ಒಳಪಡುವ ಆರೋಗ್ಯ ಸೇವಾ ಸಂಸ್ಥೆಗಳು.

ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರು ಹೊರರೋಗಿ ಹಾಗೂ ಒಳರೋಗಿ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದಾಗಿದೆ. ಉಳಿದಂತೆ, ನಗದು ರಹಿತಾ ಚಿಕಿತ್ಸಾ ಯೋಜನೆಯಡಿ ನಿಗಮದ ಮಾನ್ಯತೆ ಪಟ್ಟಿಯಲ್ಲಿದ್ದು ಯೋಜನೆಗೆ ಒಳಪಡುವ ಆರೋಗ್ಯ ಸೇವಾ ಸಂಸ್ಥೆಗಳುಈ ಕೆಳಕಂಡಂತಿವೆ.

  • ಸರ್ಕಾರಿ ಸ್ವಾಯತ್ತ ಆಸ್ಪತ್ರೆಗಳು ಮತ್ತು ಸಂಶೋಧನಾ ಸಂಸ್ಥೆಗಳು
  • ಸರ್ಕಾರಿ ಸ್ವಾಯತ್ತ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳು:
  • ಖಾಸಗಿ ಆಸ್ಪತ್ರೆಗಳು :ಏಕ,ಬಹು ತಜ್ಞ ಮತ್ತು ವಿಶೇಷ ತಜ್ಞ ಆಸ್ಪತ್ರೆಗಳು (Single, Multi Speciality and Super Speciality Hospitals)
  • ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಯುನಾನಿ ಮತ್ತು ಹೋಮಿಯೋಪತಿ ಚಿಕಿತ್ಸಾಆಸ್ಪತ್ರೆಗಳು.
  • ವೈದ್ಯಕೀಯ ರೋಗ ನಿರ್ಧಾರಕ ಕೇಂದ್ರಗಳು (Diagnostic Centres) : ಪ್ರತ್ಯೇಕ, (Stand-alone) ಅಥವಾ ವೈದ್ಯಕೀಯ ಸಂಸ್ಥೆಗಳಲ್ಲಿರುವ ಹಾಗೂ ವೈದ್ಯಕೀಯ ಸಂಸ್ಥೆಗಳೊಂದಿಗೆ ಟೈಯಪ್‌ ಆಗಿರುವ ಕೇಂದ್ರಗಳು/ಪ್ರಯೋಗಾಲಯಗಳು
  • ಕಣ್ಣಿನ ಚಿಕಿತ್ಸೆಯ ಆಸ್ಪತ್ರೆಗಳು.
  • ದಂತ ಚಿಕಿತ್ಸೆಯ ಆಸ್ಪತ್ರೆಗಳು.
  • ಹಗಲು ಚಿಕಿತ್ಸಾ ಕೇಂದ್ರಗಳು
  • ಡಯಾಲಿಸಿಸ್‌ ಕೇಂದ್ರಗಳು

ನೂತನ ನಗದು ರಹಿತಾ ಚಿಕಿತ್ಸಾ ಯೋಜನೆಯಡಿ ನಿಗಮದೊಂದಿಗೆ ಒಡಂಬಡಿಕೆ ಮಾಡಿಕೊಂಡು ಮಾನ್ಯತೆ ಪಟ್ಟಿಯಲ್ಲಿರುವ ಆಸ್ಪತ್ರೆಗಳ ವಿವರಗಳನ್ನು ಅನುಬಂಧ-ಅ ರಡಿ ಲಗತ್ತಿಸಿದೆ.

  1. ವೈದ್ಯಕೀಯ ಚಿಕಿತ್ಸೆ (Medical Treatment) : ಈ ಯೋಜನೆಯಡಿ ವೈದ್ಯಕೀಯ ಚಿಕಿತ್ಸೆ ಎಂದರೆಯೋಜನೆಯ ವ್ಯಾಪ್ತಿಗೆ ಒಳಪಟ್ಟಿರುವ ಹಾಗೂ ಯೋಜನೆಯಲ್ಲಿ ನಿರ್ಧಿಷ್ಟಪಡಿಸಲಾಗಿರುವಂತೆ
  2. ಹೊರರೋಗಿ ವೈದ್ಯಕೀಯ ಚಿಕಿತ್ಸೆ:

ನೊಂದಣಿ, ವೈದ್ಯರ ಸಮಾಲೋಚನಾ ಶುಲ್ಕ, ರೋಗ ನಿರ್ಧಾರ ವಿಧಾನಗಳು, ಪರೀಕ್ಷೆಗಳು, ಔಷಧಿಗಳು (ನಿರ್ದಿಷ್ಟ ಸಮಾಲೋಚನೆಯಲ್ಲಿ ವೈದ್ಯರು ಸೂಚಿಸಿರುವ ಸಲಹಾ ಚೀಟಿಯಂತೆ)

  • ನಿಗಮದ ನೌಕರರಿಗೆ ಹೊರರೋಗಿ ವೈದ್ಯಕೀಯ ಚಿಕಿತ್ಸೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ನೀಡಲು ಒಡಂಬಡಿಕೆ ಮಾಡಿಕೊಂಡು ಮಾನ್ಯತಾ ಪಟ್ಟಿಯಲ್ಲಿರುವ ಆಸ್ಪತ್ರೆಗಳಲ್ಲಿ ಪಡೆದ ಹೊರರೋಗಿ ವೈದ್ಯಕೀಯ ಚಿಕಿತ್ಸೆಯೂ ನಗದು ರಹಿತ ಚಿಕಿತ್ಸಾ ಯೋಜನೆಯ ವ್ಯಾಪ್ತಿಗೆ ಬರುತ್ತದೆ.
  • ಮಾನ್ಯತಾ ಪಟ್ಟಿಯಲ್ಲಿರದ ಆಸ್ಪತ್ರೆಗಳಲ್ಲಿಹೊರರೋಗಿ ಚಿಕಿತ್ಸೆ ಪಡೆದ ಪ್ರಕರಣಗಳಲ್ಲಿ ವೈದ್ಯಕೀಯ ವೆಚ್ಚವನ್ನು ಪ್ರಸ್ತುತ ಅನುಸರಿಸುತ್ತಿರುವ ಕ್ರಮದಲ್ಲಿ ನಿಯಮಾನುಸಾರ ಮರುಪಾವತಿ ಮಾಡುವುದು.
  1. ಒಳರೋಗಿ ವೈದ್ಯಕೀಯ ಚಿಕಿತ್ಸೆ :
  • ಮಾನ್ಯತಾ ಪಟ್ಟಿಯಲ್ಲಿರುವ ಆಸ್ಪತ್ರೆಗಳಲ್ಲಿ ಒಳರೋಗಿಯಾಗಿಪಡೆದ ಚಿಕಿತ್ಸೆಯುನಗದು ರಹಿತ ಚಿಕಿತ್ಸಾ ವ್ಯಾಪ್ತಿಗೆ ಬರುತ್ತದೆ.
  • ಒಳರೋಗಿಯಾಗಿ ಚಿಕಿತ್ಸೆಗೆ ಒಳಪಡುವ ಸಂದರ್ಭಗಳಲ್ಲಿಆಡಳಿತ ವರ್ಗದ ನಿಯೋಜಿತ ಅಧಿಕಾರಿಯು ಪೂರ್ವ ಮಂಜೂರಾತಿಯನ್ನು24 ಗಂಟೆಗಳ ಒಳಗಾಗಿ (Pre Authorization) ವಿಳಂಬವಿಲ್ಲದೇ ನೀಡುವುದು.
  • CGHS ದರಪಟ್ಟಿಯಲ್ಲಿ ಇಲ್ಲದಿರುವ ಇತರೇ ವಿಶೇಷ ಪ್ರಕರಣಗಳ ಚಿಕಿತ್ಸೆಗಳಿಗೆ ಪೂರ್ವಾನುಮತಿಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ತತ್ಸಂಬಂಧ ಈ ಕೆಳಗಿನಂತೆ ಅಧಿಕಾರ ಪ್ರತ್ಯಾಯೋಜನೆ ನೀಡಿದೆ.

ಅಧಿಕಾರಿಗಳು

ಮಂಜೂರು ಮಾಡಬಹುದಾದ ಮೊತ್ತ

ವ್ಯವಸ್ಥಾಪಕ ನಿರ್ದೇಶಕರು

ರೂ. 5 ಲಕ್ಷಗಳ ಮೇಲ್ಪಟ್ಟು

ನಿರ್ದೇಶಕರು(ಸಿ&ಜಾ)

ರೂ. 1 ಲಕ್ಷದಿಂದ 5 ಲಕ್ಷಗಳವರೆಗೆ

ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ

ರೂ. 1 ಲಕ್ಷದವರೆಗೆ

 

  • ಒಳರೋಗಿ ಪ್ರಕರಣಗಳಲ್ಲಿ ನೊಂದಣಿ, ವೈದ್ಯರ/ ವಿಶೇಷ ತಜ್ಞವೈದ್ಯರ ಸಮಾಲೋಚನಾ ಶುಲ್ಕ,ವೈದ್ಯರ/ ವಿಶೇಷ ತಜ್ಞ ವೈದ್ಯರ ಚಿಕಿತ್ಸಾ ಶುಲ್ಕ, ರೋಗ ನಿರ್ಧಾರಕ ವಿಧಾನಗಳು, ಪರಿಕ್ಷೇಗಳು,ಅರ್ಹ ವಾರ್ಡ್‌ ಶುಲ್ಕ, ICU ಶುಲ್ಕ, ಚಿಕಿತ್ಸಾ ವಿಧಾನಗಳು, ಇಂಪ್ಲಾಂಟ್ಟ್‌,ಹೆರಿಗೆ ಮತ್ತು ಶಿಶು ಆರೈಕೆ ಹಾಗೂ ಔಷಧೋಪಚಾರಗಳನ್ನು ಒಳಗೊಂಡಿರುತ್ತದೆ.
  • ಎಲ್ಲಾ ರೀತಿಯ ಅಳವಡಿಕೆ ಸಾಧನಗಳ ವೆಚ್ಚ (Implants Charges) CGHS ದರ ಪಟ್ಟಿಯಂತೆ ಪರಿಗಣಿಸಲಾಗುವುದು.
  • ವಾರ್ಡ್‌ ಶುಲ್ಕವನ್ನು ಅಧಿಕಾರಿ ಮತ್ತು ನೌಕರರ ದರ್ಜೆಯನ್ನು ಪರಿಗಣಿಸದೇ ಎಲ್ಲರಿಗೂ ಏಕ ರೀತಿಯಲ್ಲಿ ಅರೇ ಖಾಸಗಿ ವಾರ್ಡ್‌ (Semi Private Ward) ನಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
  • ಒಳರೋಗಿ ಚಿಕಿತ್ಸೆಯು CGHS ಪ್ಯಾಕೇಜ್‌ ದರಗಳನ್ನು ಒಳಗೊಂಡಂತೆ ಸೀಮಿತವಾಗಿರುತ್ತದೆ. ಉಪಭೋಗ್ಯ ವಸ್ತುಗಳು (Consumables), ಆಹಾರ, ಸೌಂಧರ್ಯವರ್ಧಕಗಳು, ಇತ್ಯಾದಿ ನಗದು ರಹಿತಾ ಚಿಕಿತ್ಸಾ ವ್ಯಾಪ್ತಿಗೆ ಒಳಪಡುವುದಿಲ್ಲ.
  • ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರದ ಮುಂದುವರೆದ Follow-up treatment ಅನ್ನು ಮುಂದಿನ 45 ದಿನಗಳ ವರೆಗೆ ಹೊರ ರೋಗಿಯಾಗಿ ಪಡೆಯಲು ಅವಕಾಶವಿರುತ್ತದೆ.
  1. ರೋಗ ನಿರ್ಧಾರದ ವಿಧಾನಗಳು/ತಪಾಸಣೆಗಳು (Diagnostic procedures) : ಅಂದರೆ ವಿವಿಧ ಬಗೆಯ ವೈದ್ಯಕೀಯ ತಪಾಸಣೆಗಳು (ರಕ್ತ ಪರೀಕ್ಷೆಗಳು, ಮಾದರಿ ಅಂಗಾಂಶ ಪರಿಕ್ಷೆಗಳು, Biopsy, ಇತ್ಯಾದಿ) Imaging‌ ( X-ray, City Scan, MRI, Radiology, angiogram‌, Ultrasound, ಇತ್ಯಾದಿ)
  2. ಹಗಲು ಚಿಕಿತ್ಸಾ ಕೇಂದ್ರದಲ್ಲಿ ಪಡೆಯಲಾಗುವ ಚಿಕಿತ್ಸೆಗಳು ( Day care Centres)

ಅಂದರೆ, 12 ಗಂಟೆಗಳ ಅವಧಿಗೆ ಸೀಮಿತವಾಗಿ ಆಸ್ಪತ್ರೆಗಳಲ್ಲಿ ಪಡೆಯುವ ಚಿಕಿತ್ಸೆಗಳು.

ಉದಾಹರಣೆಗೆ: 

  • ಕಿಮೋಥೆರಪಿ (Chemotherapy)
  • ಹೆಮೊಡಯಾಲಿಸಿಸ್‌ (Hemodialysis)
  • ಲಘು ವೈದ್ಯಕೀಯ ವಿಧಾನಗಳು (Minor Medical Procedures)
  • ಬಯಾಪ್ಸಿ (Biopsy)
  • ಲಘು ಶಸ್ತ್ರ ಚಿಕಿತ್ಸೆಗಳು (Minor Surgeries like D&C, Tonsillectomy, Spinal Injections, AV shunting’s etc.)
  • ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ (Cataract surgery), ಇತ್ಯಾದಿ.
  1. ಉಪಶಾಮಕ ಆರೈಕೆ (Palliative Care): ಮಾರಣಾಂತಿಕ ಖಾಯಿಲೆಯಿಂದಾಗಿ ಅಂತಿಮ ಹಂತ ತಲುಪಿದ ರೋಗಿಗಳಿಗೆ ನೀಡಲಾಗುವ ಚಿಕಿತ್ಸೆ.
  2. ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಯುನಾನಿ ಮತ್ತು ಹೋಮಿಯೋಪತಿ ಚಿಕಿತ್ಸೆಗಳು.
  3. ಆಂಬ್ಯುಲೆನ್ಸ್‌ ಸೇವೆ :

ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸುವ ಪ್ರಕರಣಗಳಲ್ಲಿ ಸಂದರ್ಭಾನುಸಾರ ನಗದು ರಹಿತ ಅಥವಾ ಮರುಪಾವತಿಗೆ ಒಳಪಟ್ಟಿರುತ್ತದೆ.

  1. ಈ ಯೋಜನೆಯಡಿ ಚಿಕಿತ್ಸೆಗೆ ಅವಕಾಶವಿಲ್ಲದಿರುವ ಪ್ರಕರಣಗಳು:
  • ಯಾವುದೇ ಚಿಕಿತ್ಸೆ ಒಳಗೊಂಡಿರದ ಶುಶ್ರೂಷ ಸೇವೆಗಳು. (|Nursing care without any active treatment)
  • ಸುರೂಪಿ ಚಿಕಿತ್ಸಾ ವಿಧಾನಗಳು: ಕೆಲವು ಸಂದರ್ಭಗಳಲ್ಲಿಅತ್ಯಾವಶ್ಯಕವಾಗಿರುವ ಸುರೂಪಿ ಚಿಕಿತ್ಸಾ ವಿಧಾನಗಳನ್ನು ಹೊರತುಪಡಿಸಿದ, (Cosmetic procedures other than “which are a part of treatment Due to accident, Burns or as a part of any illness) ಇತರೆ ಯಾವುದೇ ಸುರೂಪಿ ಅಥವಾ ಸೌಂದರ್ಯವರ್ಧಕ ಚಿಕಿತ್ಸೆಗೆ (Cosmetic or Aesthetic treatment (Lasik procedure for power correction, Liposuction for obesity etc) of any description) ಅವಕಾಶವಿರುವುದಿಲ್ಲ.
  • ಆಹಾರ ತಜ್ಞ ಸಲಹೆಗಾರರು, ಆಪ್ತ ಸಲಹೆಗಾರರು, ಫಿಸಿಯೋ ಥೆರಪಿಸ್ಟ್ ಶುಲ್ಕಗಳು,
  • ಲಸಿಕೆಗಳು Vaccination except Universal Vaccination Programmes
  • ಸಾಮಾನ್ಯ ದೌರ್ಬಲ್ಯತೆ (General Weakness)
  • MoH&FW (Ministry of Health and Family Welfare) ಅಥವಾ FDA (Food and Drug Administration) ಗಳ ಸಕ್ಷಮ ಪ್ರಾಧಿಕಾರ ʼಚಿಕಿತ್ಸೆʼ ಎಂದು ಅನುಮೋದಿಸಿರದ ಯಾವುದೇ ಚಿಕಿತ್ಸಾ ವಿಧಾನಗಳು.
  • ಪ್ರಾಯೋಗಿಕ ಚಿಕಿತ್ಸೆಗಳು.
  • ಹೊರ ರಾಜ್ಯಗಳಲ್ಲಿ ಪಡೆದ ಚಿಕಿತ್ಸೆ.
  1. ನಿಯಮಾನುಸಾರ ಮರುಪಾವತಿಗೆ ಅವಕಾಶವಿರುವ ಸಂದರ್ಭಗಳು.

ವೈದ್ತಕೀಯ ವೆಚ್ಚ ಮರುಪಾವತಿ ಸೌಲಭ್ಯ ಹಾಗೂ ನೂತನ ನಗದು ರಹಿತ“ಕೆ.ಎಸ್.ಆರ್.ಟಿ.ಸಿ ಆರೋಗ್ಯ”ಯೋಜನೆ ಎರಡೂ ಜಾರಿಯಲ್ಲಿರುತ್ತವೆ. ಆದಾಗ್ಯೂ ಅಧಿಕಾರಿಗಳು/ನೌಕರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರು ಹೆಚ್ಚಿನ ಸಂದರ್ಭಗಳಲ್ಲಿ ನಗದು ರಹಿತ ಚಿಕಿತ್ಸಾ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಉತ್ತೇಜಿಸಲಾಗಿದೆ.  ಆದಾಗ್ಯೂ ನೌಕರರು ಅನಿವಾರ್ಯ ಸಂದರ್ಭಗಳಲ್ಲಿ ಮಾನ್ಯತೆ ಇರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಲ್ಲಿ ಹಾಗೂ ಈ ಕೆಳಕಂಡ ಸಂದರ್ಭಗಳಲ್ಲಿ ನಿಯಮಾನುಸಾರ ಮರುಪಾವತಿಗೆ ಅವಕಾಶವಿರುತ್ತದೆ.

ಉದಾಹರಣೆ:

  • ಅಧಿಕಾರಿಗಳು ಮತ್ತು ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಜೀವಾಪಾಯವಿರುವ ಇರುವಂತಹ ಸಂದರ್ಭದಲ್ಲಿ ಜೀವ ರಕ್ಷಣೆಗಾಗಿ ತುರ್ತು ಚಿಕಿತೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಲ್ಲಿ.
  • ಸಾಮಾನ್ಯ ಅನಾರೋಗ್ಯ ಪ್ರಕರಣಗಳಲ್ಲಿ (ಕೆಮ್ಮು, ಶೀತ/ನೆಗಡಿ, ಜ್ವರ ಇತ್ಯಾದಿ.) ಹತ್ತಿರದ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆದಲ್ಲಿ
  • ಈ ಯೋಜನೆಯಡಿ ರೋಗಿಯನ್ನು ಮಾನ್ಯತಾ ಪಟ್ಟಿಯಲ್ಲಿರುವ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಗೆ ದಾಖಲಿಸಿದ್ದಾಗ್ಯೂ ಆಡಳಿತಾತ್ಮಕ ಮತ್ತು ತಾಂತ್ರಿಕ ದೋಷಗಳ ಕಾರಣಗಳಿಂದಾಗಿ ನೌಕರರೇ ಚಿಕಿತ್ಸಾ ವೆಚ್ಚವನ್ನು ಭರಿಸಿದ ಸಂದರ್ಭಗಳಲ್ಲಿ.
  • ಬಂಜೆತನ ಚಿಕಿತ್ಸೆಯ ವೈದ್ಯಕೀಯ ವೆಚ್ಚವನ್ನು ಪ್ರಸ್ತುತ ಜಾರಿಯಲ್ಲಿಯಲ್ಲಿರುವ ಸುತ್ತೋಲೆ ನಿರ್ದೇಶನಗಳನ್ವಯ ಮರುಪಾವತಿಗೆ ಅವಕಾಶವಿರುತ್ತದೆ.

 

  1. ವೈದ್ಯಕೀಯ ಉಪಕರಣಗಳ ಖರೀದಿಯ ವೆಚ್ಚ:

ಕನ್ನಡಕ, ಶ್ರವಣ ಸಾಧನಖರೀದಿಯ ವೆಚ್ಚ,ಕರ್ತವ್ಯ ನಿರತ ಅಪಘಾತ ಪ್ರಕರಣಗಳಲ್ಲಿ ಕೃತಕ ಕಾಲು ಅಳವಡಿಕೆಗೆ ತಗಲುವ ವೆಚ್ಚವನ್ನು ನಿಗಮದಲ್ಲಿ ಪ್ರಸ್ತುತ ಜಾರಿಯಲ್ಲಿಯಲ್ಲಿರುವ/ಕಾಲಕಾಲಕ್ಕೆ ಪರಿಷ್ಕರಿಸುವ ನಿರ್ದೇಶನಗಳನ್ವಯ ಮರುಪಾವತಿಗೆ ಅವಕಾಶವಿರುತ್ತದೆ. 

  1. ಹೊರ ರಾಜ್ಯದಲ್ಲಿ ಹಾಗೂ ವಿದೇಶದಲ್ಲಿ ಪಡೆದ ಚಿಕಿತ್ಸಾ ವೆಚ್ಚಗಳು.
  • ಹೊರರಾಜ್ಯಗಳಿಗೆ ಮಾರ್ಗ ಕಾರ್ಯಾಚರಣೆ ಮೇಲೆ ತೆರಳಿರುವ ನೌಕರರು, ಹೊರರಾಜ್ಯಗಳಲ್ಲಿ ಸ್ಥಾಪಿತವಾಗಿರುವ ನಿಗಮದ ಕೌಂಟರ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು, ಮಾರ್ಗ ತನಿಖೆ, ಇತ್ಯಾದಿ ಕರ್ತವ್ಯದ ಮೇಲೆ ಹೊರರಾಜ್ಯಗಳಿಗೆ ನಿಯೋಜನೆಗೊಂಡಿರುವ ನೌಕರರು ಕರ್ತವ್ಯ ಸ್ಥಳದ ವ್ಯಾಪ್ತಿಯಲ್ಲಿ ಅನಾರೋಗ್ಯದ ನಿಮಿತ್ತ ಪಡೆದ ಚಿಕಿತ್ಸೆಯ ವೆಚ್ಚವನ್ನು ಕ್ರಮ ಸಂಖ್ಯೆ 08 ರಲ್ಲಿ ನಿರ್ದಿಷ್ಟಪಡಿಸಿರುವ ದರಗಳನ್ವಯ ನಿಯಮಾನುಸಾರ ಮರುಪಾವತಿಗೆ ಅವಕಾಶವಿರುತ್ತದೆ.
  • ಅಧಿಕೃತ ಕರ್ತವ್ಯ, ತರಬೇತಿ, ಪ್ರಶಸ್ತಿ ಪ್ರದಾನಗಳಂತಹ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಹೊರರಾಜ್ಯ ಹಾಗೂ ವಿದೇಶಗಳಿಗೆ ಅಧಿಕೃತ ಪ್ರವಾಸದಲ್ಲಿರುವ ಅಧಿಕಾರಿ/ನೌಕರರು ಅನಾರೋಗ್ಯದ ನಿಮಿತ್ತ ಪಡೆದ ಚಿಕಿತ್ಸೆಯ ವೆಚ್ಚವನ್ನು ನಿಯಮಾನುಸಾರ ಮರುಪಾವತಿಸಲು ಅವಕಾಶವಿರುತ್ತದೆ.
  • ಮೇಲಿನ ನಿರ್ದಿಷ್ಟ ಪ್ರಕರಣಗಳ ಹೊರತುಪಡಿಸಿ ಅಧಿಕಾರಿ ಮತ್ತು ನೌಕರರು ಹಾಗೂ ಅವರ ಕುಟುಂಬದ ಅವಲಂಬಿತರು ಇತರೆ ಯಾವುದೇ ಕಾರಣಗಳಿಂದ ಹೊರರಾಜ್ಯಗಳಲ್ಲಿ/ವಿದೇಶಗಳಲ್ಲಿ ಪಡೆದ ಚಿಕಿತ್ಸಾ ವೆಚ್ಚವನ್ನು ಮರುಪಾವತಿಸಲು ಅವಕಾಶಗಳಿರುವುದಿಲ್ಲ.
  1. ಕರ್ತವ್ಯ ನಿರತ ಅಪಘಾತ ಪ್ರಕರಣಗಳು.

ಅಧಿಕಾರಿಗಳು/ನೌಕರರು ಕರ್ತವ್ಯ ನಿರತ ಸಮಯದಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಮಾನ್ಯತೆ ಪಡೆದ ಅಥವಾ ಮಾನ್ಯತೆ ಪಟ್ಟಿಯಲ್ಲಿರದ ಖಾಸಗಿ ಆಸ್ಪತ್ರೆಗಳಲ್ಲಿ ಸಂದರ್ಭಾನುಸಾರಪಡೆಯುವ ಚಿಕಿತ್ಸಾ ವೆಚ್ಚವನ್ನು ಪ್ರಸ್ತುತ ಜಾರಿಯಲ್ಲಿಯಲ್ಲಿರುವ/ಕಾಲಕಾಲಕ್ಕೆ ಪರಿಷ್ಕರಿಸುವ ನಿರ್ದೇಶನಗಳನ್ವಯ ಪೂರ್ಣಪ್ರಮಾಣದಲ್ಲಿ ಪಾವತಿಸಲು ಅವಕಾಶವಿರುತ್ತದೆ.

ಕರ್ತವ್ಯ ನಿರತ ಅಪಘಾತ ಪ್ರಕರಣಗಳಲ್ಲಿ ಟ್ರಸ್ಟ್‌ನಿಂದ ಪಾವತಿಸುವ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಅಪಘಾತ ಪರಿಹಾರ ನಿಧಿ (ARF) ಯಿಂದ ಟ್ರಸ್ಟ್‌ ಗೆ ಮರುಪಾವತಿ ಮಾಡಲಾಗುತ್ತದೆ.

 

  1. ಖಾಸಗಿ ರಸ್ತೆ ಅಪಘಾತ ಪ್ರಕರಣಗಳು:

ಅಧಿಕಾರಿಗಳು/ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಖಾಸಗಿ ರಸ್ತೆ ಅಪಘಾತ ಹಾಗೂ ಇತರೇ ಅಪಘಾತಗಳಲ್ಲಿ ಗಾಯಗೊಂಡ ಪ್ರಕರಣಗಳಲ್ಲಿಯೂ ನಿಗಮದ ಮಾನ್ಯತೆ ಹೊಂದಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಈ ಕೆಳಕಂಡ ಷರತ್ತಿಗೆ ಒಳಪಟ್ಟು  ಅವಕಾಶ ಕಲ್ಪಿಸಲಾಗಿದೆ.

  • ರಸ್ತೆ ಅಪಘಾತ ಪ್ರಕರಣಗಳಲ್ಲಿ ವೈದ್ಯಕೀಯ ವೆಚ್ಚದ ಕ್ಲೈಮ್‌ ಅನ್ನು ನ್ಯಾಯಾಲಯದಿಂದ/ವಾಹನ ವಿಮಾ ಸಂಸ್ಥೆಯಿಂದ ಪಡೆಯಬೇಕಿರುತ್ತದೆ. ಆದ್ದರಿಂದ FIR ದಾಖಲಿಸುವುದು ಹಾಗೂ ನ್ಯಾಯಾಲಯದಲ್ಲಿ MVC ಪ್ರಕರಣವನ್ನು ದಾಖಲಿಸಿ ಪರಿಹಾರ ಮೊತ್ತವನ್ನು ಪಡೆಯುವುದು ಅವಶ್ಯವಿರುತ್ತದೆ.
  • ಈ ಅಪಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಲಯದಿಂದ ವಿಮಾ ಸಂಸ್ಥೆಯಿಂದ ಅಥವಾ ಇತರೇ ಯಾವುದೇ ಮೂಲದಿಂದ ಪರಿಹಾರ ರೂಪದಲ್ಲಿ ಚಿಕಿತ್ಸೆಯ ವೆಚ್ಚದ ಮರುಪಾವತಿ ಪಡೆದಿದ್ದಲ್ಲಿ ಅದನ್ನು ಘೋಷಿಸತಕ್ಕದ್ದು.
  • ಈ ರೀತಿ ಪಡೆದ ಪರಿಹಾರ ಮೊತ್ತದಿಂದ ನಿಗಮದಿಂದ ಪಾವತಿಸಿರುವ ವೈದ್ಯಕೀಯ ವೆಚ್ಚವನ್ನು ನಿಗಮಕ್ಕೆ ಹಿಂಬರಿಸುವ ಷರತ್ತಿಗೆ ಒಳಪಟ್ಟಿರುತ್ತದೆ.
  1. ಪತಿ/ಪತ್ನಿ ಪ್ರಕರಣಗಳು :
  • ಪತಿ/ಪತ್ನಿ ಇಬ್ಬರೂ ನಿಗಮದ ನೌಕರರಾಗಿದ್ದಲ್ಲಿ ಇಬ್ಬರೂ ಸಹ ಆರೋಗ್ಯ ಕಾರ್ಡ್‌ ನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಒಬ್ಬರು ಮಾತ್ರ ತಮ್ಮ ಅವಲಂಬಿತ ಮಕ್ಕಳಿಗೆ ಈ ಸೌಲಭ್ಯ ಪಡೆಯಬೇಕಿರುತ್ತದೆ. ಉಳಿದಂತೆ ಪತಿ/ಪತ್ನಿ ಇಬ್ಬರೂ ನೌಕರರು ಅವರವರ ಅವಲಂಬಿತ ತಂದೆ ಮತ್ತು ತಾಯಿಗೆ ಈ ಸೌಲಭ್ಯ ಪಡೆಯಲು ಅವಕಾಶಗಳಿರುತ್ತವೆ.
  • ನಿಗಮದ ನೌಕರರ ಪತಿ/ಪತ್ನಿ ಸರ್ಕಾರಿ ನೌಕರರಾಗಿದ್ದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಯಿಂದ ಯಾವುದೇ ವೈದ್ಯಕೀಯ ಸೌಲಭ್ಯ ಪಡೆಯದಿರುವ ಬಗ್ಗೆ ಸಕ್ಷಮ ಪ್ರಾಧಿಕಾರಿಯಿಂದ ವರ್ಷಕ್ಕೊಮ್ಮೆ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸಿದಲ್ಲಿ ಈ ಯೋಜನೆಯ ಸೌಲಭ್ಯ ಪಡೆಯಲು ಅವಕಾಶವಿರುತ್ತದೆ.
  1. ವಂತಿಕೆ :
  • ಈ ಯೋಜನೆಗೆ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು/ನೌಕರರಿಂದ ಮಾಸಿಕ ರೂ.650/- ವಂತಿಕೆಯನ್ನು ನಿಗದಿಪಡಿಲಾಗಿದೆ. ಅದರಂತೆ ಎಲ್ಲಾ ಅಧಿಕಾರಿ/ನೌಕರರಿಂದಲೂ ಜನವರಿ-2025 ಮಾಹೆಯಲ್ಲಿ ಪಾವತಿಯಾಗುವ ಡಿಸೆಂಬರ್-2024‌ ರ ಮಾಹೆಯ ವೇತನದಿಂದ ಮುಂದುವರೆದಂತೆ ಮಾಸಿಕ ರೂ.650 ಗಳನ್ನು ಪ್ರತಿ ಮಾಹೆ ಕಡಿತಗೊಳಿಸುವುದು.
  • ಪತಿ/ಪತ್ನಿ ಇಬ್ಬರೂ ನಿಗಮದ ನೌಕರರಾಗಿರುವ ಪ್ರಕರಣಗಳಲ್ಲಿ ಇಬ್ಬರ ವೇತನದಿಂದಲೂ ನಿಗದಿತ ಮಾಸಿಕ ವಂತಿಕೆಯನ್ನು ಕಡಿತಗೊಳಿಸುವುದು.
  • ತರಬೇತಿ ನೌಕರರಿಗೆ ಯಾವುದೇ ವಂತಿಕೆ ಇರುವುದಿಲ್ಲ.
  • ನೌಕರರ ಮಾಸಿಕ ವಂತಿಕೆಯನ್ನು ರೂ.50 ರಂತೆ ಪ್ರತಿ ವರ್ಷ ಹೆಚ್ಚಿಸಿ ಪರಿಷ್ಕರಿಸುವುದು.

(ಉದಾಹರಣೆಗೆ 2025 ರ ಕ್ಯಾಲೆಂಡರ್‌ ವರ್ಷದಲ್ಲಿ ರೂ. 650, 2026 ರಲ್ಲಿ ರೂ. 650+50=700, 2027 ರಲ್ಲಿ ರೂ. 700+50=750 ರಂತೆ)

  • ನ್ಯಾಯಾಲಯದ ಆದೇಶದ ಮೇರೆಗೆ ಸಂಸ್ಥೆಯ ಸೇವೆಗೆ ಮರುನೇಮಕಗೊಳ್ಳುವ ಹಾಗೂ ಅಂತರ ನಿಗಮ ವರ್ಗಾವಣೆಯ ಮೂಲಕ ಸಂಸ್ಥೆಯ ಸೇವೆಗೆ ನಿಯೋಜನೆಗೊಳ್ಳುವ ನೌಕರರು ಕರ್ತವ್ಯಕ್ಕೆ ಹಾಜರಾಗಿ ವಂತಿಕೆ ಕಡಿತಗೊಂಡ ನಂತರ ಈ ಯೋಜನೆಯಡಿ ಸೌಲಭ್ಯಕ್ಕೆ ಅರ್ಹರಾಗುತ್ತಾರೆ.
  1. “ಕೆ.ಎಸ್.ಆರ್.ಟಿ.ಸಿ ಆರೋಗ್ಯ”ಕಾರ್ಡ್‌ :
  • ಅಧಿಕಾರಿಗಳು ಮತ್ತು ನೌಕರರು ಈಗಾಗಲೇ ನೀಡಿರುವ, ಸಾರಿಗೆ ಮಿತ್ರದಲ್ಲಿ ನಮೂದಿಸಿರುವ ನಮೂನೆ 1ಎ ಮತ್ತು 1ಬಿ ನಲ್ಲಿ ದೃಢೀಕರಿಸಿ ನೀಡಿರುವ ಮಾಹಿತಿಯ ಮೇರೆಗೆ KSRTC Arogya ಹೆಲ್ತ್‌ ಕಾರ್ಡ್‌ ಅನ್ನು ನಿಗಮದಿಂದ ನೀಡಲಾಗುತ್ತದೆ.
  • ಚಿಕಿತ್ಸೆ ಸಂದರ್ಭಗಳಲ್ಲಿ ಆರೋಗ್ಯ ಕಾರ್ಡ್‌ ಅನ್ನು ಹಾಜರು ಪಡಿಸಿ ಅಥವಾ ಭವಿಷ್ಯ ನಿಧಿ ಸಂಖ್ಯೆ ನೀಡಿ HRMS ದತ್ತಾಂಶದಲ್ಲಿನ ಮಾಹಿತಿ ದೃಢೀಕರಣದ ಮೇರೆಗೆ ಚಿಕಿತ್ಸೆಯನ್ನು ಪಡೆಯಲು ಅವಕಾಶವಿರುತ್ತದೆ.
  • ಆರೋಗ್ಯ ಕಾರ್ಡ್‌ ಕಳೆದು ಹೋದ ಪಕ್ಷದಲ್ಲಿ ಪೊಲೀಸ್‌ ಪ್ರಕರಣ ದಾಖಲಿಸಿದ ಸ್ವೀಕೃತಿಯೊಂದಿಗೆ ರೂ.150/- ಗಳ ಶುಲ್ಕವನ್ನು ವಿಭಾಗ/ಕಛೇರಿಯಲ್ಲಿ ಪಾವತಿಸಿ ಕಾರ್ಡ್‌ ಅನ್ನು ಪಡೆಯಬಹುದಾಗಿದೆ.
  • ಅಧಿಕಾರಿ/ನೌಕರರು ಸಂಸ್ಥೆಯ ಸೇವೆಯಿಂದ ನಿವೃತ್ತಿ/ಸ್ವಯಂ ನಿವೃತಿ/ವಜಾ/ಅಂತರ ನಿಗಮ ವರ್ಗಾವಣೆ ಹೊಂದಿದಪ್ರಕರಣಗಳಲ್ಲಿ ಕರ್ತವ್ಯದಿಂದ ಬಿಡುಗಡೆಗೊಂಡ ತಕ್ಷಣದಿಂದಲೇ ಆರೋಗ್ಯ ಕಾರ್ಡ್‌ ಅನ್ನು ನೌಕರರಿಂದ ವಾಪಸ್ಸು ಪಡೆಯುವುದು ಹಾಗೂ HRMS ತಂತ್ರಂಶದಲ್ಲಿರುವ ಮಾಹಿತಿಯನ್ನು ತೆಗೆದುಹಾಕುವುದು.
  1. ವಾರ್ಷಿಕ ವೈದ್ಯಕೀಯ ತಪಾಷಣೆ.

ನಿಗಮದ ನೌಕರರ ಆರೋಗ್ಯದ ಹಿತದೃಷ್ಠಿಯಿಂದ 40 ವರ್ಷ ಮೇಲ್ಪಟ್ಟ ಅಧಿಕಾರಿಗಳು ಮತ್ತು ನೌಕರರಿಗೆ ಶ್ರೀ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ರವರ ಸಹಯೋಗದಲ್ಲಿ 10 ಹೃದಯ ಸಂಬಂಧಿ ವೈದ್ಯಕೀಯ ತಪಾಸಣೆಗಳನ್ನು ಮಾಡುವ ಯೋಜನೆಯು 2023 ರಿಂದ 2028 ರ ಅವಧಿಗೆ ಜಾರಿಯಲ್ಲಿದ್ದು, ತತ್ಸಂಬಂಧ ಪ್ರತಿ ನೌಕರರನ ಪರವಾಗಿ ರೂ.1200/- ಗಳನ್ನು ನಿಗಮದಿಂದ ಪಾವತಿಸಲಾಗುತ್ತಿದೆ.

ಮುಂದುವರೆದು ಅಧಿಕಾರಿಗಳು/ನೌಕರರು ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಸಾಮಾನ್ಯ ವಾರ್ಷಿಕ ವೈದ್ಯಕೀಯ ತಪಾಸಣೆಗಳನ್ನು ಮಾಡುವಂತೆ ಮಾನ್ಯತಾ ಪಟ್ಟಿಯಲ್ಲಿರುವ ಆಸ್ಪತ್ರೆಗಳಿಗೆ ತಿಳಿಸಲಾಗಿದೆ. ಸಂಬಂಧಿತ ವೆಚ್ಚವನ್ನು ನೌಕರರು ಸ್ವತಃ ಭರಿಸಿ ವಾರ್ಷಿಕ ಆರೋಗ್ಯ ತಪಾಸಣೆಗೆ ಒಳಗಾಗಬಹುದಾಗಿರುತ್ತದೆ. ಈ ವೆಚ್ಚವು ಮರುಪಾವತಿಯ ವ್ಯಾಪ್ತಿಗೆ ಒಳಪಡುವುದಿಲ್ಲ.

  1. ದಂಡ/ಶಿಸ್ತು ಕ್ರಮ

ಉದ್ದೇಶಿತ ಯೋಜನೆಯು ನೌಕರರ ಕಲ್ಯಾಣ ಯೋಜನೆಯಾಗಿದ್ದು, ಸುಳ್ಳು/ತಪ್ಪು ಮಾಹಿತಿ ನೀಡಿದಲ್ಲಿ, ಈ ಯೋಜನೆಯನ್ನು ಯಾವುದೇ ರೀತಿಯಲ್ಲಿಯೂ ದುರ್ಬಳಕೆ ಮಾಡಿಕೊಂಡಿರುವುದು ಕಂಡುಬಂದಲ್ಲಿ, ಅವರು ಪಡೆದಿರುವ ಚಿಕಿತ್ಸಾ ವೆಚ್ಚದ ಮೂರು ಪಟ್ಟು ಮೊತ್ತವನ್ನು ದಂಡವಾಗಿ ಕಡಿತಗೊಳಿಸಲಾಗುವುದು ಹಾಗೂ ಸಂಸ್ಥೆಯ ಸೇವಾ ನಿಯಮಗಳನ್ವಯ ಶಿಸ್ತು ಕ್ರಮ ಜರುಗಿಸಲಾಗುವುದು.

  1. ಯೋಜನೆಯ ಕಾರ್ಯ ನಿರ್ವಹಣೆ (Work Flow Chart)
  • ಯೋಜನೆಯ ಜಾರಿಗಾಗಿ ಪ್ರತ್ಯೇಕ “ಕೆ.ಎಸ್.ಆರ್.ಟಿ.ಸಿ ಆರೋಗ್ಯ”ನ್ಯಾಸ ಮಂಡಳಿಯನ್ನು ರಚಿಸಲಾಗಿದೆ. ಅಲ್ಲದೇ, Health Benefit Administration (TPA) ಏಜೆನ್ಸಿಯ ಸಹಯೋಗದಲ್ಲಿ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯ ನಿರ್ವಹಣೆಯು ಬಹುತೇಕ ತಂತ್ರಜ್ಞಾನ (Online) ಆಧಾರಿತವಾಗಿರುತ್ತದೆ.
  • ಅಧಿಕಾರಿಗಳು/ನೌಕರರು ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರು ಮಾನ್ಯತೆ ಪಡೆದ ಆಸ್ಪತ್ರೆಯಲ್ಲಿ ಸಂಸ್ಥೆಯಿಂದ ನೀಡಿರುವ ಆರೋಗ್ಯ ಕಾರ್ಡ್‌ ಅನ್ನು ಹಾಜರುಪಡಿಸಿ ಅಥವಾ ಭವಿಷ್ಯ ನಿಧಿ ಸಂಖ್ಯೆಯ ಆಧಾರದ ಮೇಲೆ HRMS ನಲ್ಲಿನ ಮಾಹಿತಿ ಮೇರೆಗೆ ಆಸ್ಪತ್ರೆಯಲ್ಲಿ ಒಳರೋಗಿ/ಹೊರರೋಗಿಯಾಗಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.
  • ಯಾವುದೇ ಮಾಹಿತಿ/ಕುಂದು ಕೊರತೆ/ಸಲಹೆಗಳಿಗಾಗಿ ಸಲಹಾ ಕೇಂದ್ರ/ಸಹಾಯವಾಣಿಗೆ ಸಂಪರ್ಕಿಸುವುದು.
  • ಒಳರೋಗಿಯಾಗಿ ದಾಖಲಾಗುವ ಪ್ರಕರಣಗಳಲ್ಲಿ ಅರ್ಹ ಚಿಕಿತ್ಸಾ ವೆಚ್ಚವನ್ನು ಅಂದರೆ ಉಪಭೋಗ್ಯ (Consumables/Non-Medical expenses) ವೆಚ್ಚವನ್ನು ನೌಕರನು ಭರಿಸುವುದು. ಉಳಿದ ಎಲ್ಲಾ ಚಿಕಿತ್ಸಾ ವೆಚ್ಚವು ನಗದು ರಹಿತಾ ವ್ಯಾಪ್ತಿಗೆ ಬರುತ್ತದೆ.
  • ನೌಕರರು ಸ್ವಇಚ್ಚೆಯಿಂದ ನಿಗಧಿತ ಸೆಮಿ ಪ್ರೈವೇಟ್‌ ವಾರ್ಡ್‌ಗಿಂತ ಮೇಲಿನ ವಾರ್ಡ್‌ ಸೌಲಭ್ಯವನ್ನು ಪಡೆದುಕೊಂಡಲ್ಲಿ ವ್ಯತ್ಯಾಸದ ಮೊತ್ತವನ್ನು ಬಿಡುಗಡೆಯ ಸಂದರ್ಭದಲ್ಲಿ ಆಸ್ಪತ್ರೆಗೆ ಸ್ವತಃ ಪಾವತಿಸಬೇಕಿರುತ್ತದೆ.